ಬೀಚ್
ಫ್ಯಾಗೇಸೀ ಕುಟುಂಬಕ್ಕೆ ಸೇರಿದ ಫೇಗಸ್ ಜಾತಿಯ ಸುಮಾರು 8 ಪ್ರಭೇದಗಳ ಸಾಮಾನ್ಯ ಹೆಸರು. ಉತ್ತರ ಗೋಳಾರ್ಧಕ್ಕೆ ಸೀಮಿತವಾಗಿರುವ ಇದು ಅಲ್ಲಿಯ ಸಮಶೀತೋಷ್ಣವಲಯದ ಪ್ರಸಿದ್ಧ ವನ್ಯವೃಕ್ಷ. ಇಡೀ ಯೂರೊಪ್, ಏಷ್ಯ ಮೈನರ್, ರಷ್ಯ, ಜಪಾನ್, ಇರಾನ್, ಉತ್ತರ ಅಮೇರಿಕಾದ ನ್ಯೂ ಬ್ರನ್ಸ್‍ವಿಕ್‍ದಿಂದ ತೊಡಗಿ ಮಿನೆಸೋಟ, ದಕ್ಷಿಣ ಫ್ಲಾರಿಡ, ಟೆಕ್ಸಾಸ್ ವರೆಗಿನ ಪ್ರದೇಶಗಳಲ್ಲಿ ವ್ಯಾಪಕವಾಗಿ ಬೆಳೆಯುತ್ತದೆ. ಅಮೆರಿಕದ ಈಶಾನ್ಯ ಪ್ರದೇಶದ ಕ್ಲೈಮ್ಯಾಕ್ಸ್ ಕಾಡುಗಳ ಪ್ರಮುಖ ಸಸ್ಯವೆನಿಸಿದೆ. ಅಂತೆಯೇ ಯೂರೊಪಿನಲ್ಲಿ ದಕ್ಷಿಣ ನಾರ್ವೆ-ಸ್ವೀಡನ್ನುಗಳಿಂದ ಹಿಡಿದು ಮೆಡಿಟರೇನಿಯನ್ ಕಾಡುಗಳಲ್ಲಿ ಇದು ಬಲು ಸಾಮಾನ್ಯ. ಸ್ವಿಸ್ ಆಲ್ಪ್ಸ್ ಪರ್ವತದಲ್ಲಿ ಸುಮಾರು 1700 ಮೀ ಎತ್ತರದವರೆಗೆ ಇದು ಕಾಣದೊರೆಯುತ್ತದೆ. ಭಾರತದ ನೀಲಗಿರಿ, ಕುಲುಪ್ರದೇಶಗಳಲ್ಲಿ ಬೆಳೆಸಲಾಗಿದೆ.

ಬೀಚ್ ಪರ್ಣಪಾತಿ ವೃಕ್ಷ. ಚಳಿಗಾಲದ ಕೊನೆಗೆ ಎಲೆಗಳೆಲ್ಲ ಉದುರಿ ಮತ್ತೆ ವಸಂತದಲ್ಲಿ ಹೊಸ ಎಲೆಗಳು ಹುಟ್ಟುವುವು. ಇದು ಸುಮಾರು 30 ಮೀ. ಎತ್ತರಕ್ಕೆ ಬೆಳೆಯುವುದು. ತೊಗಟೆ ಮೃದುವಾಗಿದೆ. ಇದರ ಬಣ್ಣ ಬೂದು. ಎಲೆಗಳು ಸರಳ ಬಗೆಯವು. ಅಂಚು ದಂತಿತ. ಬೀಚ್ ಮರದಲ್ಲಿ ಹೆಣ್ಣು ಮತ್ತು ಗಂಡು ಎಂದು ಹೂಗಳು ಪ್ರತ್ಯೇಕವಾಗಿವೆಯಾದರೂ ಒಂದೇ ಮರದಲ್ಲಿ ಇವು ಅರಳುವುವು. ಹೂ ಮಂಜರಿಗಳು ಕ್ಯಾಟ್ಕಿನ್ ಮಾದರಿಯವು. ಫಲ ಸಂಪುಟ (ಕ್ಯಾಪ್ಸೂಲ್) ರೀತಿಯದು. ಶುಷ್ಕಫಲವಾದ ಇದು ಒಡೆದಾಗ ಒಳಗಿನ ಒಂದೊ ಎರಡೂ ಬೀಜಗಳನ್ನು ಹೊರಚೆಲ್ಲುತ್ತದೆ. ಫಲದ ಸಿಪ್ಪೆ ಮುಳ್ಳು ಮುಳ್ಳಾಗಿದೆ.
ಬೀಚ್ ಮರದಲ್ಲಿ ಯೂರೊಪಿಯನ್ ಬೀಚ್ (ಫೇಗಸ್ ಸಿಲ್ವೇಟಿಕ) ಮತ್ತು ಅಮೆರಿಕನ್ ಬೀಚ್ (ಫೇಗಸ್ ಗ್ರ್ಯಾಂಡಿಫ್ಲೋರ) ಎಂದು ಎರಡು ಮುಖ್ಯ ವಿಧಗಳುಂಟು.

ಯೂರೊಪಿಯನ್ ಬೀಚ್ ಮರದ ತವರು ಬ್ರಿಟನ್ ಎನ್ನಲಾಗಿದೆ. ಇಂಗ್ಲೆಂಡಿನಲ್ಲಿ ಇದರ ಹಣ್ಣಿಗೆ ಬಕ್ ಎಂಬ ಹೆಸರಿತ್ತು. ಅಲ್ಲಿಯ ಒಂದು ಪ್ರದೇಶದಲ್ಲಿ ಸಮೃದ್ಧವಾಗಿ ಈ ತೆರನ ಬೀಚ್ ಬೆಳೆಯುತ್ತಿದ್ದುದರಿಂದ ಆ ಪ್ರದೇಶಕ್ಕೆ ಬಕಿಂಗ್‍ಹ್ಯಾಮ್ ಎಂಬ ಹೆಸರೇ ಬಂತು. ಈ ಬೀಚ್‍ಗೆ ಅಗಲ ಉರುಟು ಎಲೆಗಳುಂಟು. ಆಲಿವ್-ಕಂದು ಬಣ್ಣದ ಮೃದು ತೊಗಟೆಯುಂಟು. ಮರಕ್ಕೆ ವಯಸ್ಸಾದರೂ ಅದರ ತೊಗಟೆ ಬಿರಿದುಹೋಗದು. ಆಗಸ್ಟ್-ಅಕ್ಟೋಬರ್ ವೇಳೆಗೆ ಕೆಂಗಂದು ಬಣ್ಣವನ್ನು ತಳೆಯುವ ಇದರ ಎಲೆಗಳು ಚಳಿಗಾಲದಲ್ಲಿ ತತ್‍ಕ್ಷಣ ಬೀಳದೆ ಮರದ ಮೇಲೆಯೇ ಉಳಿಯುವುವು. ಯೂರೊಪಿಯನ್ ಬೀಚ್ ಡೆನ್ಮಾರ್ಕಿನ ರಾಷ್ಟ್ರೀಯ ವೃಕ್ಷ. ಅಲಂಕಾರ ವೃಕ್ಷವಾಗಿ ಇದು ಹೆಚ್ಚು ಪ್ರಸಿದ್ಧ.

ಅಮೆರಿಕನ್ ಬೀಚ್‍ನ ಎಲೆಗಳು ಯೂರೊಪಿಯನ್ ಬೀಚ್‍ನವಕ್ಕಿಂತ ಕೊಂಚ ಉದ್ದ ಇವೆ. ಇವು ಶರತೃತುವಿನಲ್ಲಿ ಹಳದಿ ಬಣ್ಣಕ್ಕೆ ತಿರುಗಿ ಚಳಿಗಾಲದ ವೇಳೆಗೆ ಬಿದ್ದುಹೋಗುವುವು.

ಏಷ್ಯಕ್ಕೇ ಸೀಮಿತವಾಗಿರುವ ಇನ್ನಿತರ ಪ್ರಭೇದಗಳೆಂದರೆ: ಫೇ. ಎಂಗ್ಲರಿಯಾನ (ಚೈನೀಸ್ ಬೀಚ್), ಜಪಾನಿನಲ್ಲಿ ಬೆಳೆಯುವ ಫೇ. ಜಪಾನಿಕ (ಜಪಾನೀ ಬೀಚ್) ಹಾಗೂ ಸೀಬೋಲ್ಡಿಯೇ ಸೀಬೋಲ್ಡ್ ಬೀಚ್) ಅಲ್ಲದೆ ಯೂರೇಷ್ಯದಲ್ಲಿ ಬೆಳೆಯುವ ಫೇ. (ಓರಿಯಂಟಾಲಿಸ್ ಓರಿಯಂಟಲ್ ಬೀಚ್), ಮೆಕ್ಸಿಕೊ ನಿವಾಸಿಯಾದ ಫೇ. ಮೆಕ್ಸಿಕಾನ (ಮೆಕ್ಸಿಕನ್ ಬೀಚ್ ಅಥವಾ ಹಾಯು) ಎಂಬವೂ ಮುಖ್ಯವಾಗಿವೆ.

ಬೀಚ್ ಮರಗಳು ಅಲಂಕಾರ ವೃಕ್ಷಗಳಾಗಿ ಮಾತ್ರವಲ್ಲದೆ ಬೇರೆ ತೆರನಾಗಿಯೂ ಉಪಯುಕ್ತವಾಗಿವೆ. ಇವುಗಳ ಚೌಬೀನೆ ಗಟ್ಟಿ ಮತ್ತು ಬಾಳಿಕೆ ಬರುವಂಥದು. ಹಲವಾರು ಮರಗೆಲಸಗಳಿಗೆ ಒದಗುತ್ತದೆ. ಬೀಚ್ ಮರದ ಬೀಜಗಳು ಜಾನುವಾರುಗಳಿಗೆ ಮತ್ತು ಕೋಳಿಗಳಿಗೆ ಉತ್ತಮ ಆಹಾರ. ಮನುಷ್ಯರು ಕೂಡ ತಿನ್ನಬಹುದು. ಬೀಜದಿಂದ ಖಾದ್ಯತೈಲ ತಯಾರಿಸುವುದಿದೆ.
(ಪಿ.ಕೆ.ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ